ಆದಿಜೀವಯುಗ
ಭೂವಿಜ್ಞಾನದಲ್ಲಿ ಸುಮಾರು 600 ದಶಲಕ್ಷ ವರ್ಷಗಳಿಂದ 1850 ದಶಲಕ್ಷ ವರ್ಷಗಳವರೆಗಿನ ಹಿಂದಿನಕಾಲ. (ಪ್ರೊಟೆರೊ ಜೋಯಿಕ್ ಈರಾ); ಆರ್ಷೇಯ (ಆರ್ಕಿಯನ್) ಮತ್ತು ಪುರಾತನ ಜೀವ ಯುಗಗಳ (ಪೇಲಿಯೊಜೋಯಿಕ್ ಈರಾ) ನಡುವಿನಯುಗ. ಆದಿಜೀವಯುಗ ಕೊನೆಗೊಂಡೊಡನೆ (ಅಂದರೆ ಸುಮಾರು 600 ದಶಲಕ್ಷ ವರ್ಷಗಳ ಹಿಂದೆ) ಪುರಾತನ ಜೀವಯುಗದ ಕೇಂಬ್ರಿಯನ್ ಕಲ್ಪ (ಇಪಕ್) ಪ್ರಾರಂಭವಾಯಿತು. ಆಗ ರೂಪುಗೊಂಡ ಶಿಲಾಶ್ರೇಣಿಗಳ ತಳದಲ್ಲಿರುವ ಅಗಾಧ ಶಿಲಾಸಮುದಾಯಕ್ಕೆ ಪ್ರೀ ಕೇಂಬ್ರಿಯನ್ ಶಿಲಾಸಮುದಾಯವೆಂದು ಹೆಸರು. ಇದು ಭೂಮಿಯ ಇತಿಹಾಸ ಕಾಲದ ಸುಮಾರು ಮುಕ್ಕಾಲು ಭಾಗವನ್ನು ನಿರೂಪಿಸುತ್ತದೆ. ಈ ಶಿಲಾಸಮುದಾಯ ಸಂಪೂರ್ಣವಾಗಿ ಜೀವಾವಶೇಷರಹಿತವಾಗಿದೆ. ಇವುಗಳ ಮೇಲೆ ಸಂಚಯನಗೊಂಡಿರುವ ಶಿಲಾರಾಶಿಗಳಿಂದ ಕಾಲವನ್ನು ಸುಲಭವಾಗಿ ಗುರುತಿಸಬಹುದು. ಪ್ರೀ ಕೇಂಬ್ರಿಯನ್ ಶಿಲಾರಾಶಿಯನ್ನು ಕೆಳಭಾಗ ಮತ್ತು ಮೇಲ್ಭಾಗ ಎಂದು ಎರಡು ಭಾಗಗಳನ್ನಾಗಿ ವಿಭಜಿಸಬಹುದು. ಕೆಳಭಾಗ ಮುಖ್ಯವಾಗಿ ಗ್ರಾನೈಟ್ ಮತ್ತು ನೈಸ್ ಮುಂತಾದ ಅಗ್ನಿಶಿಲೆಗಳಿಂದಲೂ, ರೂಪಾಂತರಪಡೆದ ಜಲಜಶಿಲೆಗಳಿಂದಲೂ ಕೂಡಿದೆ. ಮೇಲ್ಭಾಗ ಬಹುಭಾಗ ಜಲಜಶಿಲೆಗಳಿಂದ ಆಗಿದೆ. ಈ ಜಲಜಶಿಲೆಗಳು ನೊರಜುಶಿಲೆ, ಪೆಂಟು ಶಿಲೆ, ಮರಳ ಶಿಲೆ, ಜೇಡು ಶಿಲೆ ಮತ್ತು ಸುಣ್ಣ ಶಿಲೆಗಳಾಗಿವೆ. ಇವುಗಳಲ್ಲಿ ಪ್ರವಾಹ ಪದರ, ನಕಲ ಪದರ ಮುಂತಾದ ಸಾಗರ ಶಿಲೆ ರಚನೆಗಳನ್ನು ಕಾಣಬಹುದು. ಈ ಶಿಲಾಸಮುದಾಯಗಳಲ್ಲಿ ಕೆಳಭಾಗಕ್ಕೆ ಆರ್ಷೇಯ ಶಿಲಾಸಮುದಾಯವೆಂದೂ, ಮೇಲ್ಭಾಗಕ್ಕೆ ಪ್ರೀ ಕೇಂಬ್ರಿಯನ್ ಶಿಲಾಸಮುದಾಯವೆಂದೂ ಹೆಸರು. ಇದು ಅಮೆರಿಕ ದೇಶದ ಅಲ್‍ಗಾಂಕಿಯನ್ ಸಮುದಾಯಕ್ಕೆ ಸಮವಾದುದು. ಕಡಪ ಮತ್ತು ವಿಂಧ್ಯಾ ಶಿಲಾವರ್ಗಗಳು ಈ ಸಮುದಾಯದ ಭಾಗಗಳು. ಇದು ಆದಿ ಜೀವಯುಗದ ಶಿಲಾಸಮುದಾಯ. ಆದಿ ಜೀವಯುಗದ ಶಿಲಾಸ್ಥೋಮ ಆದರ್ಶ ಜಲಜ ಶಿಲೆಗಳಿಂದ ಕೂಡಿ ಸಾವಿರಾರು ಅಡಿಗಳಷ್ಟು ಎತ್ತರವಿರುವ ಶಿಲಾಪದರಗಳ ಗುಂಪು. ಇವಕ್ಕೂ ಮತ್ತು ಆರ್ಷೇಯ ಯುಗದ ಶಿಲಾಸಮುದಾಯಗಳಿಗೂ ಮಧ್ಯದಲ್ಲಿ ದೊಡ್ಡ ಅನನುರೂಪತೆ ಇದೆ. ಇದಕ್ಕೆ ಈವಾರ್ಕೀಯನ್ ಅನನುರೂಪತೆಯೆಂದು ಹೆಸರು. ಈ ಕಾಲದ ಶಿಲಾರಾಶಿಯಲ್ಲಿ ಅನೇಕ ದೊಡ್ಡ ಮತ್ತು ಚಿಕ್ಕ ಅನನುರೂಪತೆಗಳಿವೆ. ಶಿಲಾನಿಕ್ಷೇಪದ ಕಾರ್ಯಗಳು ಅನೇಕ ಬಾರಿ ಪುನರಾವರ್ತಿಸಿರುವುದು ತಿಳಿಯುತ್ತದೆ. ಈ ಯುಗದ ಶಿಲೆಗಳು ವರ್ತಮಾನ ಕಾಲದಲ್ಲಿ ನಡೆಯುತ್ತಿರುವ ಶಿಥಿಲೀಕರಣ ಮತ್ತು ಶಿಲಾಸಂಚಯನ ಕಾರ್ಯಗಳಿಂದಲೇ ರೂಪುಗೊಂಡುವು. ಆದರೆ ಇವು ಜೀವಾವಶೇಷ ರಹಿತ. ಈ ಕಾಲದಲ್ಲಿ ಜೀವಿಗಳು ಇದ್ದುವು ಎಂಬುದಕ್ಕೆ ಸಹಜವಾದ ಸಾಕ್ಷ್ಯಗಳಿಲ್ಲ. ಆದರೆ ಅಪ್ರತ್ಯಕ್ಷ ಸಾಕ್ಷ್ಯಗಳಿಂದ ಇಂಥ ಜೀವಿಗಳಿದ್ದುವೆಂದು ಪುಷ್ಟೀಕರಿಸಬಹುದು.

ಶಿಲಾನಿಕ್ಷೇಪರಾಶಿಯನ್ನು ವರ್ತಮಾನಕಾಲದ ಭೂ ಇತಿಹಾಸದ ಆದಿಯವರೆಗೆ ಸ್ಥೂಲವಾಗಿ ಅವಲೋಕಿಸಿದರೆ ಜೀವವೃಕ್ಷ ಕೇಂಬ್ರಿಯನ್ ಕಾಲದ ಆದಿಯವರೆಗೆ ನಿರಾತಂಕವಾಗಿ ಬೆಳೆದಿರುವುದನ್ನು ಕಾಣಬಹುದು. ಆದರೆ ಇದಕ್ಕೆ ಹಿಂದಿನ ಕಾಲದಲ್ಲಿ ರೂಪುಗೊಂಡ ಶಿಲೆಗಳಲ್ಲಿ ಜೀವಾವಶೇಷದ ಕುರುಹೇ ಇಲ್ಲ. ಕೇಂಬ್ರಿಯನ್ ಯುಗದ ಪ್ರಾರಂಭದಲ್ಲಿ ಸಿಕ್ಕಿರುವ ಜೀವಾವಶೇಷಗಳು ಜೀವವೃಕ್ಷದ ಪ್ರಾರಂಭ ಕಾಲದವಲ್ಲ ಎಂಬುದು ನಮಗೆ ವ್ಯಕ್ತವಾಗುತ್ತದೆ. ಏಕೆಂದರೆ ಕೇಂಬ್ರಿಯನ್ ಕಾಲದ ಜೀವರಾಶಿ ಬಹು ಮುಂದುವರಿದಿದ್ದು ಬೆನ್ನೆಲುಬಿಲ್ಲದ ಎಲ್ಲ ಪ್ರಾಣಿಗಳಿಂದಲೂ ಪ್ರತಿನಿಧಿಸಲ್ಪಟ್ಟಿದೆ. ಆ ಮಟ್ಟವನ್ನು ಮುಟ್ಟಲು ಜೀವಿ ಬಹುಕಾಲದವರೆಗೆ ಸತತವಾಗಿ ವಿಕಾಸಹೊಂದಿದ ಅನಂತರವೇ ಸಾಧ್ಯ. ಅಂದರೆ ಕೇಂಬ್ರಿಯನ್ ಯುಗದಿಂದ ಈಗಿನವರೆಗೆ ಕಾಲಾವಧಿಯ ಪ್ರಮಾಣ ಎಷ್ಟೇ ಆದರೂ ಜೀವರಾಶಿ ಕೇಂಬ್ರಿಯನ್ ಕಾಲಕ್ಕಿಂತ ಬಹಳ ಮುಂಚಿತವಾಗಿ ಇದ್ದು ಅಧಿಕ ವಿಕಾಸ ಹೊಂದಿರಬೇಕು ಎಂಬುದನ್ನು ಶಾಸ್ತ್ರಜ್ಞರು ನಿರ್ಧರಿಸುವರು.

ಭೂ ಇತಿಹಾಸದ ಅನೇಕ ಘಟನೆಗಳ ವಿಚಾರದಲ್ಲಿ ನಾವು ಅಜ್ಞರು. ಅವುಗಳಲ್ಲಿ ಆದಿಜೀವಿಗಳ ವಿಚಾರದಲ್ಲಿ ನಮ್ಮ ಅಜ್ಞಾನ ಹೆಚ್ಚು. ಆ ಕಾಲದ ಶಿಲಾಪರಂಪರೆಗಳು ಅಂದಿನ ಜೀವಾವಶೇಷಗಳನ್ನು ಕಾದಿರಿಸಲು ಅಸಮರ್ಥವಾಗಿದ್ದುದೇ ಇದರ ಕಾರಣ. ಇದಕ್ಕೆ ವಿವರಣೆ ನೀಡಲು ಅನೇಕ ವಿಜ್ಞಾನಿಗಳು ಪ್ರಯತ್ನಿಸಿರುವರು. ಅವುಗಳನ್ನು ಈ ರೀತಿ ವರ್ಗೀಕರಿಸಬಹುದು : 1. ಆದಿ ಸಾಗರ; ಈಗಿನ ಸಾಗರಕ್ಕಿಂತ ಬಹು ಭಿನ್ನವಾಗಿತ್ತು. ಆದ್ದರಿಂದ ಆ ಕಾಲದಲ್ಲಿ ನಿಕ್ಷೇಪಗೊಂಡ ಶಿಲೆಗಳು ಜೀವಾವಶೇಷಗಳನ್ನು ಕಾಪಾಡಿ ಕಾದಿರಿಸಲು ಅಸಮರ್ಥವಾಗಿದ್ದುವು. 2. ಆ ಕಾಲದ ಜೀವರಾಶಿ ಬಹಳ ಪುರಾತನವಾಗಿದ್ದುದರಿಂದ ಅವುಗಳಲ್ಲಿ ಗಟ್ಟಿ ಭಾಗಗಳಿರಲಿಲ್ಲ. ಆದ್ದರಿಂದ ಅವುಗಳ ಅವಶೇಷಗಳು ಶಿಲೆಗಳಲ್ಲಿ ಉಳಿಯಲಿಲ್ಲ. 3. ಆ ಕಾಲದ ಸಾಗರಗಳ ನೀರಿನಲ್ಲಿ ವಿಲೀನಗೊಂಡ ಕ್ಯಾಲ್ಸಿಯಂ ಕಾರ್ಬೋನೇಟ್, ಸಿಲಿಕಾ ಮತ್ತು ಇತರ ಅಗತ್ಯವಾದ ವಸ್ತುಗಳಿರಲಿಲ್ಲ. ಆದ್ದರಿಂದ ಅಂದಿನ ಜೀವಿಗಳಿಗೆ ಗಟ್ಟಿ ಭಾಗಗಳನ್ನು ರಚಿಸಿಕೊಳ್ಳಲಾಗಲಿಲ್ಲ. 4. ಆದಿಜೀವಯುಗದ ಶಿಲೆಗಳು ಬಹಳ ಪುರಾತನ. ಅವು ಬಹುವಾಗಿ ರೂಪಾಂತರ ಹೊಂದಿ ಒಂದು ಪಕ್ಷ ಅವುಗಳಲ್ಲಿ ಜೀವಾವಶೇಷಗಳಿದ್ದರೂ ಅವೆಲ್ಲ ಈ ಕಾರಣದಿಂದ ನಾಶವಾಗಿ ಹೋಗಿವೆ.

ಈ ವಿವರಣೆಗಳನ್ನು ಪರೀಕ್ಷಿಸೋಣ. ಆದಿಜೀವಯುಗದ ಶಿಲೆಗಳು ಅವುಗಳ ಅನಂತರ ಸಂಚಯನಗೊಂಡ ಶಿಲೆಗಳಂತೆಯೇ ಸಾಗರಜನಿತ ಶಿಲೆಗಳು. ಇವುಗಳಲ್ಲಿ ಅನೇಕ ಶಿಲೆಗಳು, ಅದರಲ್ಲಿಯೂ ಭಾರತದ ಕಡಪ ಮತ್ತು ವಿಂಧ್ಯ ಕಾಲದ ಶಿಲೆಗಳು ಸೂಕ್ಷ್ಮಕಣ ಶಿಲೆಗಳಾಗಿದ್ದು ಜೀವಾವಶೇಷಗಳನ್ನು ಕಾದಿರಿಸಲು ಬಹಳ ಯೋಗ್ಯವಾಗಿವೆ. ಆದ್ದರಿಂದ ಈ ಕಾಲದ ಶಿಲೆಗಳು ಜೀವಾವಶೇಷಗಳನ್ನು ಕಾದಿರಿಸಲು ಅಸಮರ್ಥವಾದುವು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇನ್ನು ಆದಿಜೀವಿ ಕಾಲದ ಜೀವಿಗಳ ದೇಹಗಳ ಗಟ್ಟಿ ಭಾಗಗಳನ್ನು ಕುರಿತ ವಾದ. ಈ ಯುಗ ಮುಗಿದೊಡನೆ ಬರುವ ಕೇಂಬ್ರಿಯನ್ ಕಲ್ಪದ ಪ್ರಾರಂಭದಲ್ಲೇ ಜೀವಿಗಳಿಗೆ ಗಟ್ಟಿ ಭಾಗ ಉಂಟಾದದ್ದು ಹೇಗೆ? ಅಂಥ ಸನ್ನಿವೇಶ ಹೇಗೆ ಉಂಟಾಯಿತು? ಈ ಆಕ್ಷೇಪಗಳಿಗೆ ಸಮರ್ಥ ವಿವರಣೆ ಇಲ್ಲ. ಆದ್ದರಿಂದ ಈ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮೂರನೆಯ ವಾದ ಜೀವಾವಶೇಷಗಳು ರೂಪಾಂತರ ಪಡೆದು ನಾಶವಾಗಿವೆ ಎಂದು. ಇದನ್ನು ಎಲ್ಲ ಪ್ರದೇಶದ ಶಿಲಾ ಸಮುದಾಯಕ್ಕೂ ಅನ್ವಯಿಸಲಾಗುವುದಿಲ್ಲ. ಏಕೆಂದರೆ ಭಾರತದ ಕಡಪ ಮತ್ತು ವಿಂಧ್ಯ ಶಿಲಾಸಮುದಾಯಗಳು ಹೆಚ್ಚು ಚಲನೆಗೂ ರೂಪಾಂತರಕ್ಕೂ ಒಳಗಾಗಿಲ್ಲ. ಇವುಗಳಿಂದ ಆದಿಜೀವಯುಗದ ಶಿಲಾಸಮುದಾಯಗಳು ಜೀವಾವಶೇಷರಹಿತವಾಗಿರುವುದು ಒಂದು ದೊಡ್ಡ ಆಶ್ಚರ್ಯಕರ ಸಂಗತಿ. ಈ ಸಮಸ್ಯೆಯನ್ನು ಪರಿಹರಿಸಲು ವಿಜ್ಞಾನಿಗಳಿಗೆ ಇನ್ನೂ ಸಾಧ್ಯವಾಗಿಲ್ಲ.

ಆದರೂ ಆದಿಜೀವಯುಗದಲ್ಲಿ ಜೀವಿಗಳು ಇದ್ದುವೆಂಬುದನ್ನು ಸ್ಥಿರಪಡಿಸುವುದಕ್ಕೆ ನಮಗೆ ಸಾಕಾದಷ್ಟು ಆಧಾರ ದೊರಕಿದೆ. ಅತ್ಯಧಿಕ ಪ್ರಮಾಣದಲ್ಲಿ ಸುಣ್ಣಶಿಲೆ ನಿಕ್ಷೇಪ, ಗ್ರಾಫೈಟ್, ಇಂಗಾಲಾಂಶ, ಗ್ಲಾಕೊನೈಟ್ ಪಟ್ಟಿಯಿರುವ ಕಬ್ಬಿಣದ ಅದುರು ನಿಕ್ಷೇಪ ಮತ್ತು ಲ್ಯಾಟರೈಟ್ ಮುಂತಾದ ನಿಕ್ಷೇಪಗಳು ಜೀವಿಗಳು ಇರುವುದನ್ನು ಸಾರುತ್ತವೆ. ಇವೆಲ್ಲ ಅಪ್ರತ್ಯಕ್ಷ ಪ್ರಮಾಣಗಳು. ಈ ಕಾಲದ ಸುಣ್ಣ ಶಿಲೆಯಲ್ಲಿ ಕೆಲವು ಭಾಗವಾದರೂ, ಜೀವಿಗಳ ಅದರಲ್ಲೂ ಆಲ್ಗೇ ಎಂಬ ಸಸ್ಯಗಳ ಕಾರ್ಯಾಚರಣೆಯಿಂದ ಆದಂಥವು ಎಂದು ಕೆಲವರ ವಾದ. ಆದರೆ ಈ ಸುಣ್ಣ ಶಿಲೆಗಳಲ್ಲಿ ಆಲ್ಗೇಗಳ ಅವಶೇಷಗಳಿಲ್ಲ. ಆದ್ದರಿಂದ ಅವು ಜೀವಿಗಳ ಕಾರ್ಯಾಚರಣೆಯಿಂದ ಆದಂಥವೋ ಅಥವಾ ರಾಸಾಯನಿಕ ಕ್ರಿಯೆಯಿಂದ ಆದಂಥವೋ ಎಂಬ ಶಂಕೆ ಇನ್ನೂ ವಿಜ್ಞಾನಿಗಳನ್ನು ಪೀಡಿಸುತ್ತಿದೆ.

ಗ್ರಾಫೈಟ್ ಶಿಲೆ ಬಳ್ಳಿ ಬಳ್ಳಿಯಾಗಿಯೂ ಕಣವಾಗಿಯೂ ಸಿಗುತ್ತದೆ. ಕೆನಡ ದೇಶದ ಭೂವಿಜ್ಞಾನಿ ಜೆ. ಡಬ್ಲ್ಯು. ಡಾಸನ್ ಗ್ರಾಫೈಟ್ ಪದರವನ್ನು ಕಾರ್ಬ್‍ನಿಫೆರಸ್ ಕಾಲದ (ಇಂಗಾಲಯುಗ) ಕಲ್ಲಿದ್ದಲು ಪದರಗಳಿಗೆ ಹೋಲಿಸಿ ಇಷ್ಟು ಪ್ರಮಾಣದ ಇಂಗಾಲಾಂಶ ಜೀವಿಗಳ ಮೂಲಕ ಮಾತ್ರ ಸಾಧ್ಯವೆಂದು ಅಭಿಪ್ರಾಯಪಟ್ಟಿರುವನು. ಆದರೆ ಗ್ರಾಫೈಟ್ ಶಿಲೆ ಯಾವುದನ್ನು ತೆಗೆದುಕೊಂಡರೂ ಅದು ಜೀವಿಜನಿತವೆಂದು ನಿಖರವಾಗಿ ಪ್ರತಿಪಾದಿಸಲಾಗುವುದಿಲ್ಲ. ಹಾಗೆಯೇ ಪದರವಿರುವ ಕಬ್ಬಿಣದ ಅದುರು, ಮ್ಯಾಂಗನೀಸ್ ಅದುರು ಮತ್ತು ಲ್ಯಾಟರೈಟ್‍ಗಳೂ ಬ್ಯಾಕ್ಟೀರಿಯ ಜೀವಿಗಳ ಕಾರ್ಯಾಚರಣೆಯಿಂದ ನಿಕ್ಷೇಪಗೊಂಡವೆಂದು ಕೆಲವರ ಅಭಿಪ್ರಾಯ. ಆದರೆ ಯಾವ ನಿಕ್ಷೇಪವೂ ನಿರ್ದಿಷ್ಟವಾಗಿ ಹೀಗೆಯೇ ಆದುದು ಎಂದು ಸಮರ್ಥಿಸಲು ಸಾಧ್ಯವಿಲ್ಲ. ಅವು ರಾಸಾಯನಿಕವಾಗಿಯೂ ರೂಪುಗೊಳ್ಳಲು ಸಾಧ್ಯ.

ಆದಿಜೀವಯುಗದ ಶಿಲಾಸಮೂಹಗಳಲ್ಲಿ ಜೀವಾವಶೇಷಗಳನ್ನು ಹುಡುಕಲು ಕೆಲವು ಭೂವಿಜ್ಞಾನಿಗಳಿಂದ ಬಹಳ ಪ್ರಯತ್ನ ನಡೆದಿದೆ. 1858ರಲ್ಲಿ ಲೋಗಾನ್, ಕೆನಡಾದ ಲಾರೆನ್ಷಿಯನ್ ನೈಸೆ ಶಿಲೆಯಲ್ಲಿ ಒಂದು ಕುತೂಹಲಕರ ಖನಿಜ ಶೇಖರಣೆಯನ್ನು ಕಂಡುಹಿಡಿದ. ಅದರಲ್ಲಿ ಕ್ಯಾಲಸೈಟ್ ಮತ್ತು ಸರ್‍ಪೆಂಟೈನ್ ಎಂಬ ಖನಿಜಗಳು ಒಂದರಮೇಲೊಂದರಂತೆ ಅನೇಕ ಪಟ್ಟಿಗಳಾಗಿ ನಿಕ್ಷೇಪಗೊಂಡಿದ್ದುವು. ಕ್ಯಾಲಸೈಟ್ ಪ್ರಧಾನವಾಗಿಯೂ ಸರ್‍ಪೆಂಟೈನ್ ಗೂಡುಗಳನ್ನು ತುಂಬಿದಂತಿದ್ದುವು. ಇಂಥ ರಚನೆ ಖನಿಜದಲ್ಲಿರುವುದು ಬಹಳ ವಿರಳ. ಆದುದರಿಂದ ಇದಕ್ಕೆ ಜೀವಿ ಸಂಬಂಧವಿರಬೇಕೆಂದು ಲೋಗನ್ ನಿರ್ಧರಿಸಿದುದಲ್ಲದೆ ಇದಕ್ಕೆ ಒಂದು ಹೊಸ ಹೆಸರನ್ನೂ ಕೊಟ್ಟ (ಇಯೋಜೋವನ್‍ಕೆನಡನ್ಸೀಸ್). ಇದರ ವಿಚಾರವಾಗಿ ಇನ್ನೂ ಹೆಚ್ಚು ವಿವರಗಳನ್ನು ಡಬ್ಲ್ಯು. ಬಿ. ಕಾರ್ಪೆಂಟ್ ವರದಿ ಮಾಡಿದ. ಆದರೆ ಇತರ ವಿದ್ವಾಂಸರು ಇಯೋಜೋವನ್‍ಕೆನಡನ್ಸೀಸ್ ಜೀವಿಜನ್ಯವಾದುದಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಖನಿಜ ಪ್ರಪಂಚದಲ್ಲಿ ಇಯೋಜೋವನ್‍ಕೆನಡನ್ಸೀಸ್‍ನಂಥ ರಚನೆಯಿರುವುದು ಎಲ್ಲೂ ಕಂಡುಬಂದಿಲ್ಲ. ಆದರೆ ಇಷ್ಟು ಚಲನೆಗೂ ರೂಪಾಂತರಕ್ಕೂ ಒಳಗಾದ ಶಿಲಾಸಮೂಹಗಳಲ್ಲಿ ಜೀವಾವಶೇಷಗಳನ್ನು ಕಾದಿರಿಸುವುದೂ ಅಸಂಭವ. ಆದ್ದರಿಂದ ನಿಖರವಾದ ಜೀವಿಸಂಬಂಧ ವಸ್ತುಗಳನ್ನಲ್ಲದೆ ಬೇರಾವುದನ್ನೂ ಅಂಗೀಕರಿಸುವುದು ಸಾಧುವಲ್ಲ.

	1885ರಲ್ಲಿ ಜೇಮ್ಸ್ ಹಾಲ್ ಆದಿಜೀವಯುಗದ ಶಿಲೆಗಳಲ್ಲಿ ಎಳೆಕೋಸಿನಂಥ ರಚನೆಯನ್ನು ಪ್ರಾಣಿಯ ಅವಶೇಷವೆಂದು ಅಭಿಪ್ರಾಯಪಟ್ಟು ಅದನ್ನು ಕ್ರಿಪ್ಟೊಜೋವಸ್ ಎಂದು ಹೆಸರಿಸಿದ. ಇದೇ ರೀತಿಯ ರಚನೆ ಗ್ರೀನ್‍ಲ್ಯಾಂಡ್ ಮತ್ತು ಗೋಬಿ ಮರುಭೂಮಿ ಪ್ರದೇಶಗಳಲ್ಲಿ ಇರುವುದು ವರದಿಯಾಗಿದೆ. ಈ ರಚನೆಗಳು ಆಲ್ಗೇ ಎಂಬ ಸಸ್ಯದ ಅವಶೇಷವೆಂದು ವಾದಿಸಲಾಗಿದೆ. ವಾಲ್‍ಕಾಟ್ ಈ ಕಾಲದ ಶಿಲಾಸಮುದಾಯಗಳಲ್ಲಿ ಅನೇಕ ರೀತಿಯ ರಚನೆಗಳನ್ನು ವರದಿ ಮಾಡಿದ್ದಾನೆ. ಇತ್ತೀಚೆಗೆ ಭಾರತದ ಕಡಪ ಶಿಲೆಗಳಲ್ಲಿರುವ ಸುಣ್ಣ ಶಿಲೆಗಳಲ್ಲಿ ಎಂ. ಆರ್. ಶ್ರೀನಿವಾಸರಾಯರು ಈ ರೀತಿಯ ರಚನೆಯನ್ನು ವರದಿ ಮಾಡಿದ್ದಾರೆ. ಆದರೆ ಜೀವಕಣ ರಚನೆಗಳು ಇಲ್ಲದಿರುವುದರಿಂದ ಇವುಗಳನ್ನು ಜೀವಾವಶೇಷಗಳೆಂದು ಪರಿಗಣಿಸುವುದು ಬಹಳ ಕಷ್ಟ. ಅಲ್ಲದೆ ಪ್ರಯೋಗಶಾಲೆಗಳಲ್ಲಿ ಇದೇ ರೀತಿಯ ರಚನೆಗಳನ್ನು ರಾಸಾಯನಿಕ ವಿಧಾನಗಳಿಂದ ಉತ್ಪತ್ತಿ ಮಾಡಬಹುದೆಂದು ಲೆನಿಗಾಂಗ್ ತೋರಿಸಿದ್ದಾನೆ. ವಿಂಧ್ಯಶಿಲಾಸಮುದಾಯದಲ್ಲಿ ರಾಮಪುರದ ಹತ್ತಿರ ಕೊಂಬು ವಸ್ತುವಿನ ಇಂಗಾಲಾಂಶದ ಅವಶೇಷಗಳನ್ನು ಹೆಚ್. ಸಿ. ಜೋನ್ಸ್ ವರದಿ ಮಾಡಿದ್ದಾರೆ. ಆದರೆ ಇದನ್ನು ವರ್ಗೀಕರಿಸುವುದು ಬಹಳ ಕಷ್ಟ. ಇವುಗಳ ಜೊತೆಗೆ ಎಂ. ಆರ್. ಸಾಹನೀಯವರು ಕೆಲವು ಹುಳುಗಳ ಜೇಡುಗಳು ಮತ್ತು ಅಚ್ಚನ್ನು ವರದಿ ಮಾಡಿರುತ್ತಾರೆ. ಹೀಗೆ ವಿಂಧ್ಯ ಮತ್ತು ಇತರ ಪ್ರೀ ಕೇಂಬ್ರಿಯನ್ ಕಾಲದಲ್ಲಿ ಜೀವಿಗಳಿದ್ದುವೆಂಬುದಕ್ಕೆ ಅಸ್ಪಷ್ಟ ಅವಶೇಷಗಳು ಅಪ್ರತ್ಯಕ್ಷ ಪ್ರಮಾಣಗಳೂ ದೊರೆತಿವೆ ಎಂಬುದರಲ್ಲಿ ಸಂಶಯವಿಲ್ಲ.					
(ಎಂ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ